Sunday, March 7, 2010

ದಿನಕ್ಕೊಂದು ಕಗ್ಗ

ಎಡವದೆಯೆ ಮೈಗಾಯವಡೆಯದೆಯೆ ಮಗುವಾರು ।
ನಡೆಯ ಕಲಿತವನು ಮತಿನೀತಿಗತಿಯಂತು ।।
ತಡವರಿಸಿ ಮುಗ್ಗರಿಸಿ ಬಿದ್ದು ಮತ್ತೆದ್ದು ಮೈ- ।
ದಡವಿಕೊಳುವವರೆಲ್ಲ ಮಂಕುತಿಮ್ಮ ।।

Which child learnt to walk without falling down?
This is how the mind learns wisdom too.
To slip, to fall, and to shake oneself and get up:
Isn't this what everyone does? --Mankuthimma


ಮಾರನಂ ದಂಡಿಸಿರೆ ಗೌರಿಯಿಂ ಭಯವೇನು ।
ಚಾರು ಸಹಕಾರಿಯವಳೆಂದು ಶಿವನೊಲಿದನ್ ।।
ಮೀರೆ ಮೋಹವನು ಸಂಸಾರದಿಂ ಭಯವೇನು ।
ದಾರಿ ಕೆಳೆಯದು ನಿನಗೆ ಮಂಕುತಿಮ್ಮ ।।

If you can keep Cupid at bay, why dread Woman?
Siva married Parvati as a friend and companion. [1]
If you are beyond attachment, you need not fear marriage.
It is your friend as you tread the path of life. -Mankuthimma

Wednesday, March 3, 2010

ಏನಾಗಿದೆ ನಮಗೆ?????

ಮೊದಲೇ ಹೇಳಿಬಿಡುತ್ತೇನೆ, ಈ ಪ್ರಶ್ನಾರ್ಥಕ ತಲೆಬರಹವನ್ನು ನೋಡಿ confuse ಮಾಡ್ಕೊಬೇಡಿ.. ಈ ಜಂಗಮ ದೂರವಾಣಿ ಅಂದ್ರೆ ಮೊಬೈಲ್ ದೂರವಾಣಿಯ ವೃತ್ತಾಂತ ಯಾ ಅವಾಂತರ. ಹಳೆಯ ಕನ್ನಡ ಚಲನಚಿತ್ರ ಗೀತೆಯಂತೆ "ಕುಂತ್ರು ನಿಂತ್ರು ಅವ್ನ್ದೇ ಧ್ಯಾನ, ಜೀವಕ್ಕಿಲ್ಲ ಸಮಾಧಾನ ಅವನೇ ನನ್ನ ಗೆಣೆಕಾರ" ಅನ್ನೋ ಹಾಗೆ ಆಗಿದೆ ನಮ್ಮ ಸ್ಥಿತಿ.ಈಗ ಏನಾಗಿದೆ ಅಂದ್ರೆ ನಾವು ಉಣ್ಣಲು ಕೂತರು ಸಹ ಪಕ್ಕದಲ್ಲಿ ಮೊಬೈಲ್ ಇರ್ಲೇಬೇಕು. ಕುಂತ್ರೆ ಮೊಬೈಲ್, ನಿಂತ್ರೆ ಮೊಬೈಲ್, ಕೊನೆಗೆ ಮಲಗಿದ್ರು ಕೂಡ ಕನಸಲ್ಲಿ ಮೊಬೈಲ್ ಥಕಥೈ...

ಇನ್ನ ಕೆಲವ್ರಂತು ಮೊಬೈಲ್ ಕೈಗೆ ಸಿಕ್ಕಿದ್ರೆ ಸಾಕು, ಅದೇನೋ ಹೇಳ್ತಾರಲ್ಲ "ಒಂದು ಕೋತಿಗೆ ಹೆಂಡ ಕುಡಿಸಿ, ಚೇಳು ಕೈಲಿ ಕಚ್ಚಿಸಿಕೊನೆಗೆ ಒಂದು ಭೂತ ಹಿಡಿಸಿದ್ರೆ" ಆ ಮಂಗ ಹೇಗಾಡುತ್ತೋ ಥೇಟ್ ಹಾಗೆ ಆಡ್ತಾರೆ. ಅದೇನು ಮೊಬೈಲ್ ನನ್ ಹತ್ರ ಇದೆ ಅಂತ ತೋರಿಸ್ಕೊಳೊದುಕ್ಕೊ ಏನೋ, ಸುಮ್ನೆ ಸುಮ್ನೆಯಾದ್ರು ರಿಂಗ್ ಟೋನ್ ಪ್ಲೇ ಮಾಡೋದು, ಇನ್ನೇನಾದ್ರು "ಕಪಿಚೇಷ್ಟೆ" ಅಂತಾರಲ್ಲ ಹಾಗೆ ಎನಾದ್ರು ಮಾಡ್ತಾನೆ ಇರೋದು. ಈಗೆಲ್ಲ ಇದು ತುಂಬಾನೆ ಕಮ್ಮಿ ಆಗಿದೆ.. ನಾನು ನನ್ನ ಉದರನಿಮಿತ್ತಂ ನನ್ನೂರು ಚಾಮರಾಜನಗರದಿಂದ ದಿನ ಬೆಳಿಗ್ಗೆ/ಸಂಜೆ ಮೈಸೂರಿಗೆ ರೈಲಿನಲ್ಲಿ ಓಡಾಡ್ತ ಇದ್ದಾಗ ದಿನಾಲು ಅದೇ ಕಿರಿಕಿರಿ.

ಈಗಂತು ಎತ್ತ ಕಣ್ಣುಹಾಯಿಸಿದರು ಎಲ್ರ ಕೈಲೂ ಮೊಬೈಲೋ ಮೊಬೈಲು. ಇದಕ್ಕೆ ದೀರುಭಾಯಿ ಅಂಬಾನಿ ಕೊಡುಗೆ ಅಪಾರ. ಹಾಗು ಮೊಬೈಲ್ ಉಳ್ಳವರ ಸಂಖ್ಯೆಯಂತು ಹನುಮಂತನ ಬಾಲದ ಥರ ಬೆಳೀತಾನೆ ಇದೆ, ಇರುತ್ತೆ. ಮೊಬೈಲ್ ಅವಾಂತರ ಒಂದೇ, ಎರಡೇ - ಇದಕ್ಕೆಲ್ಲ ಸಾಕ್ಷಿ ಅಂದ್ರೆ ಸಿಗ್ನಲ್ ಸಿಗ್ನಲ್ನಲ್ಲು ಕಾಣಸಿಗುವ ಪೋಲೀಸ್ ಇಲಾಖೆಯ ದೊಡ್ಡ ದೊಡ್ಡ ವಿಧವಿಧದ ಎಚ್ಚರಿಕೆ ಬೋರ್ಡುಗಳು. ನೆಮ್ಮದಿಯಾಗಿ ಕೂತು ಊಟ ಮಾಡಲು ಕೂಡ ಆಗದಂಥ ಪರಿಸ್ಥಿತಿ ತಂದಿಟ್ಟಿವೆ ಈ ಮೊಬೈಲ್ ಗಳು. ಊಟಕ್ಕೆ ಕೂತಾಗಲು ಏನೋ ಚಡಪಡಿಕೆ. ಮೆಸೇಜ್ ಬಂತ, ಕಾಲ್ ಬಂತ ಅಂತಾ ನೋಡೋದೆ ನೋಡೊದು. ಹಾಗೆ ಡ್ರೈವ್ ಮಾಡೋವಾಗ ಕೂಡ ಮೆಸೇಜ್, ಕಾಲ್(ಕಾಲನ ಕರೆ!!!) ಬಂತಾ ಅಂತ ನೋಡದಿದ್ದರೆ ಮನಸ್ಸಿಗೆ ಏನೋ ಒಂದು ರೀತಿಯ ದುಗುಡ, ಅಸಹನೆ. ನನ್ನ ಪ್ರಕಾರ ಈ ಅಸಹನೆ ಮೊಬೈಲ್ ನ ಒಂದು ಕೊಡುಗೆ.

ಇನ್ನು ಮೊಬೈಲ್ ನಲ್ಲಿ ಚಾರ್ಜ್ ಇಲ್ಲದೇ ಹೋದಾಗ, ವಿದ್ಯುತ್ ಕೈ ಕೊಟ್ಟರಂತು ಕೆಲವರ ಸ್ಥಿತಿ ಒಳ್ಳೆ "ಅಂಡು ಸುಟ್ಟ ಬೆಕ್ಕಿನ ಹಾಗೆ" ಆಡ್ತ ಇರ್ತಾರೆ..

ಸರ್ವಜ್ನನ ವಚನ "ಬೆಚ್ಚನೆ ಮನೆಯಿರಲು, ವೆಚ್ಚಕೆ ಹೊನ್ನಿರಲು, ಇಚ್ಚೆಯನರಿತು ನಡೆವ ಸತಿಯಿರಲು ಸ್ವರ್ಗಕೇ ಕಿಚ್ಚು ಹಚ್ಚೆಂದ ಸರ್ವಜ್ನ" - ಈ ವಚನಕ್ಕೆ ಈಗ ಮತ್ತೊಂದು ಸಾಲು ಸೇರಿಸಬೇಕೆನಿಸುತ್ತಿದೆ (ಮಹಾನ್ ವಚನಕಾರ ಸರ್ವಜ್ನನ ಕ್ಷಮೆ ಕೋರುತ್ತ) ..
" ಕೈಯಲ್ಲೊಂದು ಮುಲ್ಟಿಮೀಡಿಯವೊಳಗೊಂಡ ಮೊಬೈಲ್ ಇರಲು ಸ್ವರ್ಗಕೇ ಕಿಚ್ಚು ಹಚ್ಚೆಂದ.." ಎಂದು ಸೇರಿಸಿದರೆ ಹೆಚ್ಚು ಸೂಕ್ತ ಅನಿಸುತ್ತೆ.

ನಾನು ಕೆಲಸಕ್ಕೆ ಸೇರಿದಾಗ ನನ್ನ ಹತ್ರ ಮೊಬೈಲ್ ಇರ್ಲಿಲ್ಲ.. ಆವಾಗ್ಲೇ ಎಷ್ಟೋ ನೆಮ್ಮದಿಯಾಗಿದ್ದೆ, ತಾಳ್ಮೆ ಇತ್ತು ಅನ್ಸುತ್ತೆ.
ಅಂದಹಾಗೆ, ಈ ಬ್ಲಾಗ್ ಬರೆಯೋವಾಗ ಕೂಡ ಮೊಬೈಲ್ ನದ್ದೆ ಕಾರುಬಾರು, ಐಲು ಐಲು ಐಲು ಕೈಲಿದ್ರೆ ಮೊಬೈಲು... ಕೊನೆಗೂ ಮೊಬೈಲ್ ಗೆದ್ದಿತು... ನನಗೊಂದು ಕರೆ ಬರ್ತಾ ಇದೆ... ಮತ್ತೆ ಸಿಗ್ತೀನಿ.... ಟ್ರಿಣ್ ಟ್ರಿಣ್...ಮೊಬೈಲಾಯ ನಮಃ.. ಮೊಬೈಲ್ ಗೆ ಜೈ....

Monday, March 1, 2010

ನಾಳೆ ಅಂದವನ ಮನೆ ಹಾಳು...

ನಮ್ಮ ಮನೆ ಬೆಕ್ಕು ಮೊನ್ನೆ ಮೊನ್ನೆ ತಾನೆ ೪ ಮುದ್ದಾದ ಮರಿಗಳನ್ನು ಹೆತ್ತು ತಾಯ್ತನದ ಸಂಭ್ರಮವನ್ನು ಅನುಭವಿಸುತ್ತಿತ್ತು. ಬೆಕ್ಕಿನ ಮರಿಗಳು ಅಡಿಗೆಮನೆಯ ಅಟ್ಟದ ಮೇಲೆ ಒಂದು ರಟ್ಟಿನ ಡಬ್ಬದಲ್ಲಿ ಆರಾಮವಾಗಿದ್ದವು. ಅದರ ನೇರಕ್ಕೆ exhaust fan ಇತ್ತ್ತು. ಆ exhaust fan ಕಿಂಡಿಯಲ್ಲಿ ಕುಳಿತು ಇನ್ನೊಂದು ಬೆಕ್ಕ್ಕುಆ ಬೆಕ್ಕಿನ ಮರಿಗಳನ್ನು ಕೊಲ್ಲಲು/ತಿನ್ನಲು ಹೊಂಚು ಹಾಕಿದ್ದುದು ನನ್ನಮ್ಮನ ಗಮನಕ್ಕೆ ಬಂದಿತ್ತು. ನಾನು ಎಂದಿನಂತೆ ಕಳೆದ ವಾರಾಂತ್ಯದಲ್ಲಿ ಮನೆಗೆ ಹೋದಾಗ ಬೆಕ್ಕಿನಮರಿಗಳನ್ನು ನೋಡಿ ಪುಳಕಗೊಂಡಿದ್ದೆ. ಬೇರೆ ಬೆಕ್ಕೊಂದರಿಂದ ತೊಂದರೆಯಿದೆ ಎಂದು ಗೊತ್ತಾದ ಮೇಲೆ ಬೆಳಿಗ್ಗೆ ಹೇಗಾದರು ಮಾಡಿ ಆ exhaust fan ಕಿಂಡಿಯನ್ನು ಮುಚ್ಚಿಹಾಕಲು ಯೋಜಿಸಿದ್ದೆ. ಆ ಘಳಿಗೆಯಲ್ಲಿ "ನಾಳೆ ಅಂದವನ ಮನೆ ಹಾಳು" ಅನ್ನೋ ಮಾತನ್ನು ಮರೆತಿದ್ದೆ. ನಾಳೆ ಅಂದಿದ್ದೇ ಬೆಕ್ಕಿನಮರಿಗಳಿಗೆ ಮುಳುವಾಯಿತು ನೋಡಿ.

ಶನಿವಾರ ರಾತ್ರಿ ಸುಮಾರು ೧.೩೦ರ ಹೊತ್ತಿನಲ್ಲಿ ನನ್ನಮ್ಮ ಎದ್ದು ಕಿರುಚುವುದು ಕೇಳಿಸಿದಾಗಲೇ ಏನೋ ಎಡವಟ್ಟಾಗಿದೆ ಎಂದು ನನ್ನ ಅರಿವಿಗೆ ಬಂತು. ಆದದ್ದಿಷ್ಟೆ-ಆ ಕಳ್ಳಬೆಕ್ಕು ಅಡಿಗೆಮನೆಯ exhaust fan ನ ರೆಕ್ಕೆಯೊಂದನ್ನು ಮುರಿದು ಒಳನುಗ್ಗಿದ್ದೇ, ನೇರವಾಗಿ ಬೆಕ್ಕಿನ ಮರಿಗಳನ್ನು ಕಚ್ಚಲು ಶುರು ಮಾಡಿದೆ. ಅಮ್ಮಬೆಕ್ಕು ಗಾಬರಿಯಲ್ಲಿ ಸ್ವಲ್ಪ ಕಿರುಚಾಡಿ, ಜಗಳವಾಡಿ ಪ್ರತಿರೋಧ ತೋರಿದೆ. ಇಷ್ಟು ಆಗುವಷ್ಟ್ರರಲ್ಲಿ ನನ್ನ ಎಂಟ್ರಿ. ಕೈಗೆ ಸಿಕ್ಕಿದ ಪೊರಕೆಯೊಂದರ ಹಿಡಿಯಿಂದ ಸಾಕುಬೇಕೆನ್ನುವಷ್ಟು ಏಟುಗಳು ಬಿದ್ದವು. ಆದರು ಆ ಬೆಕ್ಕು ಛಲ ಬಿಡದ ತ್ರಿವಿಕ್ರಮನಂತೆ ಮತ್ತೆ ಮತ್ತೆ ಅಲ್ಲೇ ಟಳಾಯಿಸತೊಡಗಿತು. ಇನ್ನು ಅದನ್ನು ತಡೆಯಲಸಾಧ್ಯ ಎನಿಸಿದಾಗ ನೇರ ಅದರ ಕತ್ತಿಗೆ ಕೈ ಹಾಕಿ ಹಿಡಿದೆ ನೋಡಿ, ಅದರ ರೋಷ ತಾಪಕ್ಕೆ ನನ್ನ ಬೆರಳು ಅಂಗೈಗಳು ತುತ್ತಾಯಿತು. ಕೊನೆಗೂ ಅಮ್ಮ ಅಡಿಗೆಮನೆ ಕಿಟಕಿ ತೆಗೆದ ಮೇಲೆ ಆ ಕೊಲೆಪಾತಕ ಬೆಕ್ಕು ಓಡಿಹೋಯಿತು. ಅಷ್ಟ್ರರಲ್ಲಾಗಲೇ ಒಂದು ಮುದ್ದಾದ ಮರಿಯ ಪ್ರಾಣಪಕ್ಷಿ ಹಾರಿಹೋಗಿತ್ತು. ಆ ಕ್ಷಣಕ್ಕೆ ನಮ್ಮ ಮನೆಯ ಮುದ್ದಿನ ಬೆಕ್ಕು ಹಲವು ದಿನಗಳಿಂದ ಮರಿಗಳನ್ನು ಹೊತ್ತು ಪಡುತ್ತಿದ್ದ ಕಷ್ಟ ಕಣ್ಮುಂದೆ ಹಾದುಹೋಯ್ತು.. ರಾತ್ರಿಯ ಗಲಾಟೆಯಲ್ಲಿ ಒಂದು ಮರಿ ಸತ್ತಿದ್ದನ್ನು ಗಮನಿಸದ ಬೆಕ್ಕಮ್ಮ, ಮರುದಿನ ಬೆಳಿಗ್ಗೆ ಒಂದು ಬೆಕ್ಕಿನ ಮರಿ ಇಲ್ಲ ಎಂಬುದು ಬೆಕ್ಕಮ್ಮನ ಗಮನಕ್ಕೆ ಬಂದಮೇಲಂತು ಅದರ ರೋಧನ ಮನೆಯವರೆಲ್ಲರನ್ನು ಮಮ್ಮಲಮರುಗುವಂತೆ ಮಾಡಿತು. ಈ ಕಾಲದಲ್ಲಿ ಮನುಷ್ಯನಿಗೇ ಇಲ್ಲದಷ್ಟು ಅಂತಃಕರಣ ಆ ಮೂಕಪ್ರಾಣಿಗೆ ಇದ್ದಿದ್ದು ನೋಡಿ ನನಗಂತು ನನ್ನ ಮೇಲೆ ಹೇಸಿಗೆಯಾಗುವಂತೆ ಮಾಡಿದೆ..

ಆದರೆ ನನಗೆ ಮತ್ತೆ ಇಂದು ಬೆಳಿಗ್ಗೆ ಆಘಾತವಾದದ್ದು ಇನ್ನು ಒಂದು ಬೆಕ್ಕಿನಮರಿ ಚಿರನಿದ್ರೆಗೆ ತೆರಳಿದಾಗ. ಅಂತೂ ನನ್ನ ಹೊಣೆಗೇಡಿತನದಿಂದಾಗಿ, ಎರಡು ಮುದ್ದಾದ ಬೆಕ್ಕಿನಮರಿಗಳು ಜೀವಕಳೆದುಕೊಂಡವು. ಮತ್ತೆಂದೂ ನಾಳೆ ಅನ್ನದೇ ಆಗಿನ ಕೆಲಸ ಆಗಲೇ ಮುಗಿಸಬೇಕೆಂಬ ಪಣ ತೊಟ್ಟಿದ್ದೇನೆ... ಇನ್ನಾದರು ನನಗೆ ಎಲ್ಲದಕ್ಕು "ನಾಳೆ" ಅನ್ನದೇ ಇರುವ ಹಾಗೆ ಬುದ್ದಿ ಕೊಡು ಭಗವಂತ ಎಂದು ಬೇಡುತ್ತ, ನನ್ನಲ್ಲಿ ಪಾಪಪ್ರಜ್ನೆಯನ್ನು ಹುಟ್ಟುಹಾಕಿರುವ ಆ ಬೆಕ್ಕಿನ ಮರಿಗಳ ಆತ್ಮಕ್ಕೆ ಶಾಂತಿ ಕೋರುತ್ತಿದ್ದೇನೆ..