Wednesday, March 3, 2010

ಏನಾಗಿದೆ ನಮಗೆ?????

ಮೊದಲೇ ಹೇಳಿಬಿಡುತ್ತೇನೆ, ಈ ಪ್ರಶ್ನಾರ್ಥಕ ತಲೆಬರಹವನ್ನು ನೋಡಿ confuse ಮಾಡ್ಕೊಬೇಡಿ.. ಈ ಜಂಗಮ ದೂರವಾಣಿ ಅಂದ್ರೆ ಮೊಬೈಲ್ ದೂರವಾಣಿಯ ವೃತ್ತಾಂತ ಯಾ ಅವಾಂತರ. ಹಳೆಯ ಕನ್ನಡ ಚಲನಚಿತ್ರ ಗೀತೆಯಂತೆ "ಕುಂತ್ರು ನಿಂತ್ರು ಅವ್ನ್ದೇ ಧ್ಯಾನ, ಜೀವಕ್ಕಿಲ್ಲ ಸಮಾಧಾನ ಅವನೇ ನನ್ನ ಗೆಣೆಕಾರ" ಅನ್ನೋ ಹಾಗೆ ಆಗಿದೆ ನಮ್ಮ ಸ್ಥಿತಿ.ಈಗ ಏನಾಗಿದೆ ಅಂದ್ರೆ ನಾವು ಉಣ್ಣಲು ಕೂತರು ಸಹ ಪಕ್ಕದಲ್ಲಿ ಮೊಬೈಲ್ ಇರ್ಲೇಬೇಕು. ಕುಂತ್ರೆ ಮೊಬೈಲ್, ನಿಂತ್ರೆ ಮೊಬೈಲ್, ಕೊನೆಗೆ ಮಲಗಿದ್ರು ಕೂಡ ಕನಸಲ್ಲಿ ಮೊಬೈಲ್ ಥಕಥೈ...

ಇನ್ನ ಕೆಲವ್ರಂತು ಮೊಬೈಲ್ ಕೈಗೆ ಸಿಕ್ಕಿದ್ರೆ ಸಾಕು, ಅದೇನೋ ಹೇಳ್ತಾರಲ್ಲ "ಒಂದು ಕೋತಿಗೆ ಹೆಂಡ ಕುಡಿಸಿ, ಚೇಳು ಕೈಲಿ ಕಚ್ಚಿಸಿಕೊನೆಗೆ ಒಂದು ಭೂತ ಹಿಡಿಸಿದ್ರೆ" ಆ ಮಂಗ ಹೇಗಾಡುತ್ತೋ ಥೇಟ್ ಹಾಗೆ ಆಡ್ತಾರೆ. ಅದೇನು ಮೊಬೈಲ್ ನನ್ ಹತ್ರ ಇದೆ ಅಂತ ತೋರಿಸ್ಕೊಳೊದುಕ್ಕೊ ಏನೋ, ಸುಮ್ನೆ ಸುಮ್ನೆಯಾದ್ರು ರಿಂಗ್ ಟೋನ್ ಪ್ಲೇ ಮಾಡೋದು, ಇನ್ನೇನಾದ್ರು "ಕಪಿಚೇಷ್ಟೆ" ಅಂತಾರಲ್ಲ ಹಾಗೆ ಎನಾದ್ರು ಮಾಡ್ತಾನೆ ಇರೋದು. ಈಗೆಲ್ಲ ಇದು ತುಂಬಾನೆ ಕಮ್ಮಿ ಆಗಿದೆ.. ನಾನು ನನ್ನ ಉದರನಿಮಿತ್ತಂ ನನ್ನೂರು ಚಾಮರಾಜನಗರದಿಂದ ದಿನ ಬೆಳಿಗ್ಗೆ/ಸಂಜೆ ಮೈಸೂರಿಗೆ ರೈಲಿನಲ್ಲಿ ಓಡಾಡ್ತ ಇದ್ದಾಗ ದಿನಾಲು ಅದೇ ಕಿರಿಕಿರಿ.

ಈಗಂತು ಎತ್ತ ಕಣ್ಣುಹಾಯಿಸಿದರು ಎಲ್ರ ಕೈಲೂ ಮೊಬೈಲೋ ಮೊಬೈಲು. ಇದಕ್ಕೆ ದೀರುಭಾಯಿ ಅಂಬಾನಿ ಕೊಡುಗೆ ಅಪಾರ. ಹಾಗು ಮೊಬೈಲ್ ಉಳ್ಳವರ ಸಂಖ್ಯೆಯಂತು ಹನುಮಂತನ ಬಾಲದ ಥರ ಬೆಳೀತಾನೆ ಇದೆ, ಇರುತ್ತೆ. ಮೊಬೈಲ್ ಅವಾಂತರ ಒಂದೇ, ಎರಡೇ - ಇದಕ್ಕೆಲ್ಲ ಸಾಕ್ಷಿ ಅಂದ್ರೆ ಸಿಗ್ನಲ್ ಸಿಗ್ನಲ್ನಲ್ಲು ಕಾಣಸಿಗುವ ಪೋಲೀಸ್ ಇಲಾಖೆಯ ದೊಡ್ಡ ದೊಡ್ಡ ವಿಧವಿಧದ ಎಚ್ಚರಿಕೆ ಬೋರ್ಡುಗಳು. ನೆಮ್ಮದಿಯಾಗಿ ಕೂತು ಊಟ ಮಾಡಲು ಕೂಡ ಆಗದಂಥ ಪರಿಸ್ಥಿತಿ ತಂದಿಟ್ಟಿವೆ ಈ ಮೊಬೈಲ್ ಗಳು. ಊಟಕ್ಕೆ ಕೂತಾಗಲು ಏನೋ ಚಡಪಡಿಕೆ. ಮೆಸೇಜ್ ಬಂತ, ಕಾಲ್ ಬಂತ ಅಂತಾ ನೋಡೋದೆ ನೋಡೊದು. ಹಾಗೆ ಡ್ರೈವ್ ಮಾಡೋವಾಗ ಕೂಡ ಮೆಸೇಜ್, ಕಾಲ್(ಕಾಲನ ಕರೆ!!!) ಬಂತಾ ಅಂತ ನೋಡದಿದ್ದರೆ ಮನಸ್ಸಿಗೆ ಏನೋ ಒಂದು ರೀತಿಯ ದುಗುಡ, ಅಸಹನೆ. ನನ್ನ ಪ್ರಕಾರ ಈ ಅಸಹನೆ ಮೊಬೈಲ್ ನ ಒಂದು ಕೊಡುಗೆ.

ಇನ್ನು ಮೊಬೈಲ್ ನಲ್ಲಿ ಚಾರ್ಜ್ ಇಲ್ಲದೇ ಹೋದಾಗ, ವಿದ್ಯುತ್ ಕೈ ಕೊಟ್ಟರಂತು ಕೆಲವರ ಸ್ಥಿತಿ ಒಳ್ಳೆ "ಅಂಡು ಸುಟ್ಟ ಬೆಕ್ಕಿನ ಹಾಗೆ" ಆಡ್ತ ಇರ್ತಾರೆ..

ಸರ್ವಜ್ನನ ವಚನ "ಬೆಚ್ಚನೆ ಮನೆಯಿರಲು, ವೆಚ್ಚಕೆ ಹೊನ್ನಿರಲು, ಇಚ್ಚೆಯನರಿತು ನಡೆವ ಸತಿಯಿರಲು ಸ್ವರ್ಗಕೇ ಕಿಚ್ಚು ಹಚ್ಚೆಂದ ಸರ್ವಜ್ನ" - ಈ ವಚನಕ್ಕೆ ಈಗ ಮತ್ತೊಂದು ಸಾಲು ಸೇರಿಸಬೇಕೆನಿಸುತ್ತಿದೆ (ಮಹಾನ್ ವಚನಕಾರ ಸರ್ವಜ್ನನ ಕ್ಷಮೆ ಕೋರುತ್ತ) ..
" ಕೈಯಲ್ಲೊಂದು ಮುಲ್ಟಿಮೀಡಿಯವೊಳಗೊಂಡ ಮೊಬೈಲ್ ಇರಲು ಸ್ವರ್ಗಕೇ ಕಿಚ್ಚು ಹಚ್ಚೆಂದ.." ಎಂದು ಸೇರಿಸಿದರೆ ಹೆಚ್ಚು ಸೂಕ್ತ ಅನಿಸುತ್ತೆ.

ನಾನು ಕೆಲಸಕ್ಕೆ ಸೇರಿದಾಗ ನನ್ನ ಹತ್ರ ಮೊಬೈಲ್ ಇರ್ಲಿಲ್ಲ.. ಆವಾಗ್ಲೇ ಎಷ್ಟೋ ನೆಮ್ಮದಿಯಾಗಿದ್ದೆ, ತಾಳ್ಮೆ ಇತ್ತು ಅನ್ಸುತ್ತೆ.
ಅಂದಹಾಗೆ, ಈ ಬ್ಲಾಗ್ ಬರೆಯೋವಾಗ ಕೂಡ ಮೊಬೈಲ್ ನದ್ದೆ ಕಾರುಬಾರು, ಐಲು ಐಲು ಐಲು ಕೈಲಿದ್ರೆ ಮೊಬೈಲು... ಕೊನೆಗೂ ಮೊಬೈಲ್ ಗೆದ್ದಿತು... ನನಗೊಂದು ಕರೆ ಬರ್ತಾ ಇದೆ... ಮತ್ತೆ ಸಿಗ್ತೀನಿ.... ಟ್ರಿಣ್ ಟ್ರಿಣ್...ಮೊಬೈಲಾಯ ನಮಃ.. ಮೊಬೈಲ್ ಗೆ ಜೈ....

No comments:

Post a Comment